By ಪ್ರಮೋದ್ ಶ್ರೀಧರಮೂರ್ತಿ
ಶಾಲೆಗಳಲ್ಲಿ AI ಬಳಕೆಯ ಬಗೆಗಿನ ಬಹುಪಾಲು ಉತ್ಸಾಹವು ಒಂದು ಸರಳ ನಂಬಿಕೆಯ ಮೇಲೆ ನಿಂತಿದೆ: ಬೋಧನೆ ಎಂದರೆ ಕೇವಲ ಪರಿಕಲ್ಪನೆಗಳನ್ನು ವಿವರಿಸುವುದು. ಒಂದು ಯಂತ್ರವು ಭಿನ್ನರಾಶಿ, ವ್ಯಾಕರಣ ಅಥವಾ ಕೋಡಿಂಗ್ ಅನ್ನು ತಾಳ್ಮೆಯಿಂದ ವಿವರಿಸಬಲ್ಲದಾದರೆ, ಶಿಕ್ಷಕರ ಪಾತ್ರ ಕಡಿಮೆಯಾಗಬಹುದು ಎಂಬುದು ಇದರ ಸಾರ. ಮೇಲ್ನೋಟಕ್ಕೆ ಈ ಮಾತು ನಿಜವೆಂದೇ ಅನಿಸುತ್ತದೆ. ಆದರೆ, ನಾವು ಒಂದು ಕಹಿ ಸತ್ಯವನ್ನು ಮರೆಯುವಂತಿಲ್ಲ: ಬಹುಪಾಲು ಮಕ್ಕಳು ತಾವಾಗಿಯೇ ಕಲಿಯುವ ಹಂಬಲದೊಂದಿಗೆ ಶಾಲೆಗೆ ಬರುವುದಿಲ್ಲ.
ಕೆಲವು ಮಕ್ಕಳು ಕಲಿಯಬೇಕೆಂಬ ಉತ್ಸಾಹದಿಂದಲೇ ಬೆಳಿಗ್ಗೆ ಎದ್ದೇಳುತ್ತಾರೆ. ಆದರೆ ಬಹುತೇಕ ಮಕ್ಕಳು ಹಾಗಿರುವುದಿಲ್ಲ. ಮಕ್ಕಳಿಗೆ ಆಟ, ಕಥೆಗಳು, ಸ್ನೇಹಿತರು, ಪ್ರಶಂಸೆ ಮತ್ತು ಹೊಸ ವಿಷಯಗಳ ಅನ್ವೇಷಣೆ ಇಷ್ಟವಾಗುತ್ತದೆ. ಆದರೆ ಶಿಸ್ತುಬದ್ಧ ಕಲಿಕೆಯೆಂದರೆ ಅದರಲ್ಲಿ ಗೊಂದಲ, ಪುನರಾವರ್ತನೆ, ತಿದ್ದುಪಡಿ, ಬೇಸರ, ವೈಫಲ್ಯ ಮತ್ತು ವಿಷಯ ಇನ್ನೂ ಅರ್ಥವಾಗದಾಗ ಎದುರಾಗುವ ಸವಾಲುಗಳೂ ಇರುತ್ತವೆ. ಇಂತಹ ಸವಾಲುಗಳನ್ನು ಸಹಜವಾಗಿ ಸ್ವೀಕರಿಸಿ ಮುನ್ನಡೆಯುವ ಮಕ್ಕಳು ಬಹಳ ಕಡಿಮೆ.
ಒಂದು ಪರಿಕಲ್ಪನೆಯನ್ನು ವಿವರಿಸುವುದು ಬೋಧನೆಯಲ್ಲಿ ಎದ್ದು ಕಾಣುವ ಒಂದು ಭಾಗ ಮಾತ್ರ. ಮಗುವಿಗೆ ತನಗೆ ಇನ್ನೂ ಆಸಕ್ತಿಯಿಲ್ಲದ ವಿಷಯದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವುದು, ಕಷ್ಟವೆನಿಸಿದರೂ ಅದರಲ್ಲೇ ಮುಂದುವರಿಯಲು ಬೆಂಬಲಿಸುವುದು, ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗುವುದು, ಶಿಸ್ತನ್ನು ರೂಢಿಸುವುದು ಮತ್ತು ಅಂತಿಮವಾಗಿ ಕಲಿಕೆಯನ್ನು ಮಗು ತನ್ನದಾಗಿಸಿಕೊಳ್ಳುವಂತೆ ಮಾಡುವುದು—ಇದು ಬೋಧನೆಯ ಅತ್ಯಂತ ಕಠಿಣ ಮತ್ತು ಹೊರಗೆ ಕಾಣಿಸದ ನಿಜವಾದ ಕೆಲಸ.
ಒಂದು ಯಂತ್ರವು ತಾಳ್ಮೆಯಿಂದ ವಿವರಿಸಬಲ್ಲದು; ಉದಾಹರಣೆಗಳನ್ನು ಸೃಷ್ಟಿಸಬಲ್ಲದು, ಅನುವಾದಿಸಬಲ್ಲದು, ರಸಪ್ರಶ್ನೆಗಳನ್ನು ನಡೆಸಬಲ್ಲದು ಮತ್ತು ಪ್ರತಿಕ್ರಿಯೆಯನ್ನೂ ನೀಡಬಲ್ಲದು. ಆದರೆ ಇದೆಲ್ಲವೂ ಉಪಯೋಗವಾಗಬೇಕಾದರೆ, ಮಗು ಮೊದಲು ಕಲಿಕೆಯ ಸವಾಲುಗಳನ್ನು ಎದುರಿಸಲು ಸಿದ್ಧವಿರಬೇಕು ಮತ್ತು ಪ್ರಗತಿಯ ಅನುಭವವಾಗುವವರೆಗೆ ಆ ಸವಾಲಿನಲ್ಲೇ ಮುಂದುವರಿಯುವ ತಾಳ್ಮೆ ಹೊಂದಿರಬೇಕು. ಕಲಿಯಲು ಆಸಕ್ತಿಯೇ ಇಲ್ಲದ, ಏನನ್ನು ಕೇಳಬೇಕೆಂದು ತಿಳಿಯದ ಅಥವಾ ಸಣ್ಣ ಗೊಂದಲಕ್ಕೇ ಶರಣಾಗುವ ವಿದ್ಯಾರ್ಥಿಗೆ ಪರಿಪೂರ್ಣವಾದ ವಿವರಣೆಯನ್ನು ನೀಡಿದರೂ ಹೆಚ್ಚೇನೂ ಪ್ರಯೋಜನವಿಲ್ಲ. ಇತ್ತೀಚಿನ ಸಂಶೋಧನೆಗಳೂ ಇದನ್ನೇ ತೋರಿಸುತ್ತಿವೆ: AI ಉಪಕರಣಗಳು ಮಾಹಿತಿಯನ್ನು ಸುಲಭವಾಗಿ ಒದಗಿಸಬಲ್ಲವು, ಆದರೆ ಅವು ವಿದ್ಯಾರ್ಥಿಗಳ ಆಸಕ್ತಿ ಮತ್ತು ಪ್ರೇರಣೆಯಂತಹ ಕಠಿಣ ಸಮಸ್ಯೆಯನ್ನು ತಾವಾಗಿಯೇ ಪರಿಹರಿಸಲಾರವು.
ಮಕ್ಕಳಿಗೆ ಪಾಠ ಹೇಳಿಕೊಟ್ಟ ಪ್ರತಿಯೊಬ್ಬರಿಗೂ ಒಂದು ವಿಚಾರ ಚೆನ್ನಾಗಿ ಗೊತ್ತಿರುತ್ತದೆ: ಕಲಿಕೆಯೆನ್ನುವುದು ಯಾವಾಗಲೂ ಕುತೂಹಲದಿಂದಲೇ ಶುರುವಾಗುವುದಿಲ್ಲ. ಹೆಚ್ಚಾಗಿ ಅದು ಒಂದು ರೀತಿಯ ಹಿಂಜರಿಕೆಯಿಂದಲೇ ಶುರುವಾಗುತ್ತದೆ. ಮಗು “ನನಗೆ ಇದು ಅರ್ಥವಾಗುತ್ತಿಲ್ಲ” ಎನ್ನಬಹುದು, ಅಥವಾ ಪ್ರಯತ್ನಿಸುವುದನ್ನೇ ನಿಲ್ಲಿಸಬಹುದು, ಇಲ್ಲವೇ ಕಪ್ಪುಹಲಗೆಯಿಂದ ಸುಮ್ಮನೆ ನಕಲು ಮಾಡಬಹುದು. ಅಂಥಹ ಕ್ಷಣವನ್ನು ಗುರುತಿಸಿ, ಮಗು ಆ ಸಮಸ್ಯೆಯೊಂದಿಗೆ ಇನ್ನೊಂದಿಷ್ಟು ಸಮಯ ಕಳೆಯುವಂತೆ ಮಾಡುವುದೇ ಶಿಕ್ಷಕರ ಕೆಲಸ.
ಉತ್ತಮ ಬೋಧನೆಯು ಕಲಿಕೆಯ ಹಾದಿಯಲ್ಲಿನ ಸವಾಲುಗಳನ್ನು ಮಾಯ ಮಾಡುವುದಿಲ್ಲ. ಬದಲಿಗೆ, ಮಗು ಹಿಂಜರಿಕೆಯಿಲ್ಲದೆ ಪ್ರಯತ್ನ ಮುಂದುವರಿಸುವಂತೆ ಆ ಸವಾಲನ್ನು ಸುರಕ್ಷಿತವಾಗಿಸುತ್ತದೆ. ತೀರಾ ಕಡಿಮೆ ಒತ್ತಡವಿದ್ದರೆ ಮಗು ಆರಾಮಾಗಿರುತ್ತದೆಯೇ ಹೊರತು ಪ್ರಗತಿ ಸಾಧಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಅತಿಯಾದ ಒತ್ತಡ ಹೇರಿದರೆ, ಮಗು ಸೋತಂತೆ ಅಥವಾ ಅವಮಾನವಾದಂತೆ ಭಾವಿಸುತ್ತದೆ. ಆದ್ದರಿಂದ, ಕಷ್ಟಪಡುವುದನ್ನು ಸಹಜವೆಂದು ಪರಿಗಣಿಸುವ, ತಪ್ಪು ಮಾಡುವುದು ಅವಮಾನವಲ್ಲ ಎಂದು ತಿಳಿಹೇಳುವ ಮತ್ತು ಸತತ ಪ್ರಯತ್ನವನ್ನು ನಿರೀಕ್ಷಿಸುವ ‘ಸುರಕ್ಷಿತ ಪ್ರಯತ್ನದ ವಾತಾವರಣ’ವನ್ನು (safe struggle space)ಶಿಕ್ಷಕರು ನಿರ್ಮಿಸಬೇಕಾಗುತ್ತದೆ.
ಇದು ಆರಂಭದಲ್ಲಿ ಹೊರಗಿನಿಂದ ಹೇರಿದ ಶಿಸ್ತಿನಂತೆ ಕಾಣಬಹುದು. ಶಿಕ್ಷಕರು ದಿನಚರಿ, ನಿರೀಕ್ಷೆ ಮತ್ತು ಜವಾಬ್ದಾರಿಗಳನ್ನು ರೂಪಿಸುತ್ತಾರೆ. ‘ಸಮಸ್ಯೆಯ ಬಗ್ಗೆ ಚಿಂತಿಸು’, ‘ಉತ್ತರಿಸಲು ಪ್ರಯತ್ನಿಸು’, ‘ಮತ್ತೊಮ್ಮೆ ಓದು’, ‘ಅಭ್ಯಾಸವನ್ನು ಪೂರ್ಣಗೊಳಿಸು’ – ಇಂತಹ ಸಣ್ಣ ಸಣ್ಣ ಕಾರ್ಯಗಳೇ ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಕ್ರಮೇಣ ಬಲಪಡಿಸುತ್ತವೆ.
ಕಾಲಕ್ರಮೇಣ, ಮಗು ಕೇವಲ ನಿಯಮಗಳನ್ನು ಪಾಲಿಸುವ ಹಂತದಿಂದ ಶಿಕ್ಷಕರನ್ನು ನೋಡಿ ಕಲಿಯುವ ಮತ್ತು ಅನುಕರಿಸುವ ಹಂತಕ್ಕೆ ಬೆಳೆಯುತ್ತದೆ. ಪೂರ್ವಸಿದ್ಧತೆ ಮಾಡಿಕೊಳ್ಳುವ, ತನ್ನ ಆಲೋಚನೆಗಳನ್ನು ಹಂಚಿಕೊಳ್ಳುವ, ತಪ್ಪುಗಳನ್ನು ಮುಕ್ತವಾಗಿ ತಿದ್ದಿಕೊಳ್ಳುವ, ಪ್ರಶ್ನೆಗಳನ್ನು ಕೇಳುವ ಮತ್ತು ಕಲಿಕೆಯನ್ನು ಗಂಭೀರವಾಗಿ ಪರಿಗಣಿಸುವ ಶಿಕ್ಷಕನೇ, ‘ಉತ್ತಮ ವಿದ್ಯಾರ್ಥಿ ಹೇಗಿರಬೇಕು’ ಎಂಬುದಕ್ಕೆ ಮಾದರಿಯಾಗುತ್ತಾನೆ.
ನಂತರ ಪ್ರಗತಿಯು ಕಣ್ಣಿಗೆ ಕಾಣತೊಡಗುತ್ತದೆ. “ನಿನ್ನೆ ನನಗೆ ಇದನ್ನು ಮಾಡಲು ಸಾಧ್ಯವಿರಲಿಲ್ಲ, ಇಂದು ನಾನು ಮಾಡಬಲ್ಲೆ” ಎಂದು ಅರಿತುಕೊಳ್ಳುವ ಮಗು, ಆ ಪ್ರಕ್ರಿಯೆಯ ಮೇಲೆ ನಂಬಿಕೆ ಇಡಲು ಪ್ರಾರಂಭಿಸುತ್ತದೆ.
ಆ ಹಂತದ ನಂತರ, ಕಲಿಕೆಗೆ ಒಂದು ಉದ್ದೇಶ ಬೇಕಾಗುತ್ತದೆ. ಕಷ್ಟಪಟ್ಟು ಓದುವುದು ಕೇವಲ ಪರೀಕ್ಷೆಗಳಿಗಾಗಿ ಮಾತ್ರವಲ್ಲ; ಬದಲಿಗೆ, ಅದು ತನ್ನ ಸಾಮರ್ಥ್ಯ, ಘನತೆ, ಅವಕಾಶ, ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ಬೆಸೆದಿರುವ ದಾರಿ ಎಂಬುದನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು.
ಕೊನೆಯ ಹಂತವೇ ಪ್ರೇರಣೆ (Inspiration). ವಿದ್ಯಾರ್ಥಿಯು ಸ್ವತಃ ತಾನೇ ಗುರಿಗಳನ್ನು ನಿಗದಿಪಡಿಸಲು, ಪ್ರಶ್ನೆಗಳನ್ನು ಕೇಳಲು, ಸಂಪನ್ಮೂಲಗಳನ್ನು ಹುಡುಕಲು ಮತ್ತು ಜವಾಬ್ದಾರಿಯನ್ನು ಹೊರಲು ಪ್ರಾರಂಭಿಸುತ್ತಾನೆ. ಒಂದು ಕಾಲದಲ್ಲಿ ಹೊರಗಿನಿಂದ ಬಂದ ಶಿಸ್ತು, ಈಗ ನಿಧಾನವಾಗಿ ಮಗುವಿನ ಒಳಗೇ ಜಾಗ ಪಡೆದುಕೊಂಡಿರುತ್ತದೆ.
ಶಿಕ್ಷಕರ ಪಾತ್ರದ ಅತ್ಯಂತ ಪ್ರಮುಖ ಹಂತವಿದು: ಬಾಹ್ಯ ಶಿಸ್ತಿನಿಂದ ಆಂತರಿಕ ನಿಯಂತ್ರಣದ ಕಡೆಗೆ, ಪರಾವಲಂಬನೆಯಿಂದ ಸ್ವಾವಲಂಬನೆಯ ಕಡೆಗೆ, ಒತ್ತಾಯದಿಂದ ಪ್ರೇರಣೆಯ ಕಡೆಗೆ ಸಾಗುವ ಪಯಣ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆಯು ಈ ಪಯಣವನ್ನು ಯಾವಾಗಲೂ ಗುರುತಿಸುವುದಿಲ್ಲ ಅಥವಾ ಪುರಸ್ಕರಿಸುವುದಿಲ್ಲ. ಶಾಲೆಗಳು ಕೇವಲ ಪಠ್ಯಕ್ರಮ ಪೂರ್ಣಗೊಳಿಸುವಿಕೆ, ತರಗತಿಯ ನಿಯಂತ್ರಣ ಮತ್ತು ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆಯೇ ಶಿಕ್ಷಕರನ್ನು ತರಬೇತುಗೊಳಿಸುತ್ತವೆ ಮತ್ತು ಅಳೆಯುತ್ತವೆ. ಇದರಿಂದಾಗಿ ಶಿಕ್ಷಕರು ಸಹ ತಮ್ಮ ಕೆಲಸವನ್ನು ಇಂತಹ ಮೇಲ್ನೋಟದ ಮಾನದಂಡಗಳ ಮೂಲಕವೇ ಮೌಲ್ಯಮಾಪನ ಮಾಡಲು ಪ್ರಾರಂಭಿಸಬಹುದು. ಇವು ಮುಖ್ಯವೇ, ಆದರೆ ಇಷ್ಟೇ ಸಾಕಾಗುವುದಿಲ್ಲ.
ಕಲಿಯುವವನಲ್ಲಿ ಈಗಾಗಲೇ ಸ್ವಲ್ಪ ಮಟ್ಟಿನ ಸ್ವಯಂ-ನಿರ್ದೇಶನ ಇದ್ದಾಗ, ಅಥವಾ ಶಿಕ್ಷಕರು ಆ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತಿರುವಾಗ ಮಾತ್ರ AI ಅತ್ಯಂತ ಶಕ್ತಿಶಾಲಿಯಾಗುತ್ತದೆ. ಕುತೂಹಲಿ, ಶಿಸ್ತುಬದ್ಧ ಮತ್ತು ಮತ್ತೊಮ್ಮೆ ಪ್ರಯತ್ನಿಸಲು ಸಿದ್ಧರಿರುವ ವಿದ್ಯಾರ್ಥಿಗೆ AI ಖಂಡಿತ ಹೊಸ ಅವಕಾಶಗಳನ್ನು ಒದಗಿಸಬಲ್ಲದು. ಆದರೆ ಆಸಕ್ತಿಯಿಲ್ಲದ, ಸೋಲಿನ ಭಯವಿರುವ ಅಥವಾ ಸುಮ್ಮನೆ ನಕಲು ಮಾಡಲು ಒಗ್ಗಿಕೊಂಡಿರುವ ವಿದ್ಯಾರ್ಥಿಗೆ AI ಕೇವಲ ಮತ್ತೊಂದು ಪರದೆಯಾಗಬಹುದು, ಅಥವಾ ಇನ್ನೂ ಕಳವಳಕಾರಿಯೆಂದರೆ, ಏನನ್ನೂ ಕಲಿಯದೆಯೇ ಉತ್ತರಗಳನ್ನು ನೀಡುವ ಸುಲಭ ದಾರಿಯಾಗಬಹುದು.
ಈ ಚರ್ಚೆಯಲ್ಲಿ ನಿಜವಾದ ಅಪಾಯವಿರುವುದು ಕೃತಕ ಬುದ್ಧಿಮತ್ತೆಯಲ್ಲ. ನಿಜವಾದ ಅಪಾಯವೆಂದರೆ ‘ಬೋಧನೆ ಮತ್ತು ಕಲಿಕೆ’ಯ ಬಗ್ಗೆ ನಮಗಿರುವ ಮೇಲ್ನೋಟದ ತಿಳುವಳಿಕೆ. ಮಗು ಯಾವುದೇ ಉಪಕರಣದಿಂದ ಪ್ರಯೋಜನ ಪಡೆಯುವ ಮುನ್ನ, “ನನಗೆ ಇದನ್ನು ಮಾಡಲು ಸಾಧ್ಯವಿಲ್ಲ” ಎಂಬ ಸ್ಥಿತಿಯಿಂದ “ನಾನು ಮತ್ತೊಮ್ಮೆ ಪ್ರಯತ್ನಿಸುತ್ತೇನೆ” ಎಂಬ ಸ್ಥಿತಿಯವರೆಗಿನ ಆ ಮೊದಲ ಕಮರಿಯನ್ನು ದಾಟಲು (cross that first chasm) ಯಾರಾದರೂ ಆ ಮಗುವಿಗೆ ಸಹಾಯ ಮಾಡಬೇಕು. ಆ ‘ಯಾರೋ ಒಬ್ಬರು’ ಸಾಮಾನ್ಯವಾಗಿ ಶಿಕ್ಷಕರೇ ಆಗಿರುತ್ತಾರೆ. ಅವರು ಕೇವಲ ಮಾಹಿತಿಯ ಮೂಲವಾಗಿ ಅಲ್ಲ; ಬದಲಿಗೆ, ಮಗುವಿನ ಅಳುಕು ಮತ್ತು ಆತ್ಮವಿಶ್ವಾಸದ ನಡುವಿನ ಸೇತುವೆಯಾಗಿ ನಿಲ್ಲುತ್ತಾರೆ.
AI ಬಗೆಗಿನ ಈ ಅತಿಯಾದ ಉತ್ಸಾಹದಲ್ಲಿ, ಕಠಿಣ ಪ್ರಶ್ನೆಯ ಮುಂದೆ ಕುಳಿತು, ಕೈಬಿಡಬೇಕೋ ಅಥವಾ ಮತ್ತೊಮ್ಮೆ ಪ್ರಯತ್ನಿಸಬೇಕೋ ಎಂಬ ಗೊಂದಲದಲ್ಲಿರುವ ಮಗುವನ್ನು ನಾವು ಮರೆಯಬಾರದು. ಆ ಕ್ಷಣವನ್ನು ಬದಲಾಯಿಸುವುದು ಹಾಗೂ ಮಗು ಆ ಸಮಸ್ಯೆಯೊಂದಿಗೆ ಇನ್ನೊಂದಿಷ್ಟು ಸಮಯ ಕಳೆಯುವಂತೆ ಧೈರ್ಯ ತುಂಬಿ, ಆ ಪ್ರಯತ್ನವನ್ನು ಮಗುವಿಗೆ ಸುರಕ್ಷಿತವಾಗಿಸುವವರು ಹೆಚ್ಚಾಗಿ ಒಬ್ಬ ಶಿಕ್ಷಕರೇ ಆಗಿರುತ್ತಾರೆ.